1794-1854. ಇಂಗ್ಲಿಷ್ ಗದ್ಯಬರೆಹಗಾರ, ವಿಮರ್ಶಕ, ಕಾದಂಬರಿಕಾರ. ಗ್ಲಾಸ್ಗೊ ಮತ್ತು ಆಕ್ಸ್‍ಫರ್ಡಿನಲ್ಲಿ ವಿದ್ಯಾಭ್ಯಾಸ ಮಾಡಿದ. ಬ್ಲಾಕ್‍ವುಡ್ ಮ್ಯಾಗ್‍ಜೈನ್‍ನ ವಿಮರ್ಶಕ ಪಂಗಡಕ್ಕೆ ಸೇರಿದವ. ಈತನ ವಿಮರ್ಶೆಯ ತೀಕ್ಷ್ಣತೆಯಿಂದಾಗಿ ಈತನಿಗೆ ‘ಚೇಳು’ ಎನ್ನುವ ಬಿರುದು ಬಂದಿತ್ತು. 1820ರಲ್ಲಿ ಸರ್ ವಾಲ್ಟರ್ ಸ್ಕಾಟ್‍ನ ಮಗಳು ಸೊಫೈಯಳನ್ನು ಮದುವೆಯಾದ. 1825 ರಿಂದ 1953ರವರೆಗೆ ‘ಕ್ವಾರ್ಟಲಿ ರಿವ್ಯೂ’ದ ಸಂಪಾದಕನಾಗಿದ್ದ. 

1828ರಲ್ಲಿ ಈತ ಬನ್ ನ ಜೀವನಚರಿತ್ರೆಯನ್ನು ಪ್ರಕಟಿಸಿದ. 1838ರಲ್ಲಿ ಈತನ ಪ್ರಸಿದ್ಧ ಕೃತಿ ಲೈಫ್ ಆಫ್ ಸ್ಕಾಟ್ ಪ್ರಕಟವಾಯಿತು. ಕೃತಿಯ ನಾಯಕನ ಬಗೆಗಿನ ಅಪಾರ ಗೌರವ ಮತ್ತು ಸಹಾನುಭೂತಿ, ಸಮತೂಕವಾದ ವಿಮರ್ಶೆ, ಉಜ್ವಲವಾದ ಪಾತ್ರಚಿತ್ರಣ, ಹಾಸ್ಯ-ಇವೆಲ್ಲವೂ ಕೂಡಿ ಇದು ಇಂಗ್ಲಿಷ್ ಭಾಷೆಯಲ್ಲಿಯ ಅತಿಶ್ರೇಷ್ಠ ಜೀವನಚರಿತ್ರೆಗಳಲ್ಲಿ ಒಂದಾಗಿದೆ. ಎಡಿನ್‍ಬರೊ ಮತ್ತು ಲಂಡನ್‍ನ ಜೀವನದ ಸ್ವಾರಸ್ಯವಾದ ಚಿತ್ರಗಳನ್ನು ಈತನ ‘ಪೀಟರ್ಸ್ ಲೆಟರ್ಸ್ ಟು ಹಿಸ್ ಕಿನ್ಸ್ ಫೋಕ್’ ನಲ್ಲಿ (1819) ಕಾಣಬಹುದು.	
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ